ಮಾತೇ ಮಾಣಿಕ್ಯ !

               ಜಗತ್ತಿನಲ್ಲಿ ಅತ್ಯಂತ ಸೂಕ್ಷ್ಮವಾದ ವಸ್ತು ಯಾವುದು ಅಂದರೆ ಅದು "ಮಾತು"! 
ಎಷ್ಟು ಗಾದೆಗಳು ಬೇಕು ಮಾತಿನಬಗ್ಗೆ? "ಮಾತು ಮನೆ ಕೆಡಿಸ್ತು ತೂತು ಓಲೆ ಕೆಡಿಸ್ತು" , "ಆಡಿದ ಮಾತು ಕಳೆದ ಸಮಯ ಒಡೆದುಹೋದ ಮುತ್ತಿನಂತೆ" ಮತ್ತಿನ್ನಿತರೆ ಗಾದೆಗಳು ಮಾತಿನ ಸೂಕ್ಷ್ಮತೆಯನ್ನು ಬಣ್ಣಿಸುತ್ತವೆ. ಒಂದು ಮಾತು ಏನೆಲ್ಲ ರಾಧಾಂತಗಳನ್ನು ಸೃಷ್ಟಿಸಬಲ್ಲದು ಅಂತ ಹುಡುಕಿದರೆ ನಮಗೆಲ್ಲ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಬಸವಣ್ಣನವರು ನಾವಾಡುವ ಮಾತು ಹೇಗಿರಬೇಕು ಎನ್ನುವದರ ಬಗ್ಗೆ ಹೀಗೆ ಹೇಳುತ್ತಾರೆ "ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಅಂತ. ನಮಗೆ ವಿದ್ಯೆ ಯೊಂದಿದ್ದರೆ ಅಷ್ಟೇ ಸಾಕಾಗದು, ನಾವು ನಮ್ಮ ವಿದ್ಯಯನ್ನು ಹೇಗೆ ಇನ್ನೊಬ್ಬರಿಗೆ ತಿಳಿ ಹೇಳುತ್ತೇವೆ ಅನ್ನುವದೂ ಪ್ರಮುಖಯವಲ್ಲವೇ! ಹೀಗೊಂದು ಉದಾಹರಣೆ ಹೇಳುತ್ತೇನೆ ಚಿಕ್ಕವರಿದ್ದಾಗ ನಾವಿದನ್ನು ಕೇಳಿ ಬೆಳಿದಿದ್ದೇವೆ ನಿಜ, ಇನ್ನೊಮ್ಮೆ ಮೆಲಕು ಹಾಕೋಣ! 

        ಒಬ್ಬ ರಾಜ ತನ್ನ ಆಸ್ಥಾನದಲ್ಲಿದ್ದ ಎಲ್ಲಾ ಜ್ಯೋತಿಷಿಗಳನ್ನು ಒಮ್ಮೆ ಬರಹೇಳಿದ. ಅದರಲ್ಲಿಯೇ ಅತೀ ಶ್ರೇಷ್ಠರಾದ ಇಬ್ಬರು ಜ್ಯೋತಿಷಿಗಳನ್ನು ಆಯಿದುಕೊಂಡು ಅವರಿಗೆ ತನ್ನ ಕುಟುಂಬದ ಬಗ್ಗೆ ಮತ್ತು ತನ್ನ ರಾಜಾಡಳಿತದ ಬಗ್ಗೆ ಭವಿಷ್ಯ ತಿಳಿಸಿಕೊಡಬೇಕೆಂದು ಕೇಳಿದ. ಮೊದಲನೇ ಜ್ಯೋತಿಷಿ ರಾಜನಿಗೆ  ಕೇಳುತ್ತಾನೆ "ಪ್ರಭು, ನಿಮಗೆ ಒಂದು ಕೆಟ್ಟ ವಿಚಾರವಿದೆ. ನಿಮ್ಮ ಕುಟುಂಬ ನಿಮ್ಮ ಕಣ್ಣ ಮುಂದೆಯೇ ನಾಶವಾಗಲಿದೆ ಅಂತ". ಇದನ್ನ ಕೇಳಿ ರಾಜನ ಪಿತ್ತ ನೆತ್ತಿಗೇರಿತು! ಆ ಜ್ಯೋತಿಷಿಯನ್ನ ಸೆರೆಮನೆಗೆ ಹಾಕುವಂತೆ ಸೇವಕರಿಗೆ ಹೇಳಿದ. ಸೇವಕರು ಆತನನ್ನು ಸೆರೆಮನೆಗೆ ನೂಕಿದರು. ಇನ್ನೊಬ್ಬ ಜ್ಯೋತಿಷಿಯನ್ನು ರಾಜ ಬರಹೇಳಿದ. ಎರಡನೇ ಜ್ಯೋತಿಷಿ ಹೇಳಿದ "ಪ್ರಭು ನಿಮಗೆ ನಿಮ್ಮ ಕುಟುಂಬದಲ್ಲಿಯೇ ಎಲ್ಲರಿಗಿಂತ ಆಯಸ್ಸು ಜಾಸ್ತಿ ಇದೆ ಅಂತ". ರಾಜ ಅವನಿಗೆ ಚಿನ್ನದ ಸರ ಕೊಟ್ಟು ಕಳಿಸಿದ. ಅವರಿಬ್ಬರ ಉದ್ದೇಶ ಒಂದೇ ಇತ್ತು ನಿಜ ಆದರೆ ಆಡುವ ಮಾತಿನ ಧಾಟಿ ಬೇರೆ ಇತ್ತು ಅಲ್ಲವೇ ? 

      ಮನೆಯಲ್ಲಿ, ಕಛೇರಿಯಲ್ಲಿ, ಸ್ನೇಹಿತರಲ್ಲಿ ಜಗಳಗಳು ಭಿನ್ನಾಭಿಪ್ರಾಯಗಳು ಬರುವುದು ಮಾತಿನಿಂದನೇ ಅಲ್ಲವೇ? ನಾವಾಡುವ ಮಾತು ಆಗಿನ ಸಂದರ್ಭಕ್ಕೆ ನಮಗೆ ಸರಿ ಅನಿಸುತ್ತಿರಬಹುದು ಆದರೆ ಮುಂದೆ ಅದರ ಪರಿಣಾಮವೇನಾಗಬಹುದು ಅನ್ನುವದನ್ನು ಯೋಚಿಸಿ ಮಾತನಾಡಿದರೆ ನಾವು ಗೆದ್ದೆವೆಂದೇ ಅರ್ಥ!

ಇಂತಿ ನಿಮ್ಮ,

MD ಹರೀಶ 



Comments

Post a Comment

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ಗರ್ಭ ಗುಡಿ [Episode - 1]

ಕನಸು ತಿರುಕನ ಕನಸಾಗದಿರಲಿ ...